Faculty of Medical & Allied Health Sciences +91-08234-287436 / 287433
Faculty of Medical & Allied Health Sciences +91-08234-287436 / 287433

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರು

Adichunchanagiri Institute of Medical Sciences > AIMS-General > ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರು
ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಕನ್ನಡ ಬಳಗದ ಸದಸ್ಯರು ಮಂಡ್ಯದಲ್ಲಿ ಡಿಸೆಂಬರ್ ೨೦-೨೨ ರವರೆಗೆ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ೨೦೨೪ ರಲ್ಲಿ ಅಭಿಮಾನಪೂರಕವಾಗಿ ಭಾಗವಹಿಸಿದರು. 
 
ಕನ್ನಡದ ಐಕ್ಯತೆಯ ಧೋತಕವಾಗಿ ನಮ್ಮಸಾಹಿತ್ಯ-ಸಂಸ್ಕೃತಿ-ಪರಂಪರೆಯನ್ನು ಬಿಂಬಿಸುವ ಹಾಗೂ ನಾಡು-ನುಡಿಯ ಬಗೆಗಿನ ಅಭಿಮಾನವನ್ನು ಮೂಡಿಸುವ ಈ ವಿಶೇಷ ಕಾರ್ಯಕ್ರಮದಿಂದ   ಸಾಹಿತ್ಯಾಭಿರುಚಿ ಹೆಚ್ಚಿಸಿಕೊಳ್ಳವ ಮತ್ತು ಕನ್ನಡ ನಾಡು ನುಡಿ ಬಗ್ಗೆ ವಿವಿಧ ಗೋಷ್ಠಿಗಳಿಂದ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕನ್ನಡ ಬಳಗದ ಸದಸ್ಯರು ೨ನೇ ದಿನ (ಡಿಸೆಂಬರ್ ೨೧, ೨೦೨೪) ಸಮ್ಮೇಳನದ ಸ್ಥಳಕ್ಕೆ (ಸ್ಯಾಂಜೋ ಆಸ್ಪತ್ರೆ ಹಿಂಭಾಗ) ಭೇಟಿ ನೀಡಿದರು.
 
 *ಪರಮಪೂಜ್ಯ  ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ* ಉಪಸ್ಥಿತಿಯಲ್ಲಿ ಹಾಗೂ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ನಾಡೋಜ ಗೊ. ರು. ಚನ್ನಬಸಪ್ಪರ ಅಧ್ಯಕ್ಷತೆಯಲ್ಲಿ  ಇನ್ನಿತರೆ ರಾಜಕೀಯ ನಾಯಕರುಗಳು ಮತ್ತು ಸಾಹಿತಿಗಳ ಸಮಕ್ಷಮದಲ್ಲಿ ಉದ್ಘಾಟಿತಗೊಂಡ ಈ ಸಮ್ಮೇಳನಕ್ಕಾಗಿ ಡಿಸೆಂಬರ್ 20 ಮತ್ತು 21 ರಂದು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಎರಡು ದಿನಗಳ ರಜೆ ಘೋಷಿಸಲಾಗಿತ್ತು . ಆದಿಚುಂಚನಗಿರಿ ವಿಶ್ವವಿದ್ಯಾಲಯದ ವತಿಯಿಂದ ಪ್ರತ್ಯೇಕ ಪುಸ್ತಕ ಮಳಿಗೆಗಳು ಕೂಡ ಇದಿದ್ದು ವಿಶೇಷವಾಗಿತ್ತು. ಒಕ್ಕಲಿಗರ ಸಾಧನೆ,  ಅಧ್ಯಾತ್ಮಿಕ ಚಿಂತನೆ, ಆದಿಚುಂಚನಗಿರಿ ಮಠದ ಕೊಡುಗೆ, ಜಿಲ್ಲಾ ಮಾಹಿತಿ, ಕೃಷಿ ಮುಂತಾದವುಗಳ ಬಗ್ಗೆ ಪುಸ್ತಕಗಳು ಈ ಮಳಿಗೆಗಳಲ್ಲಿ ಪ್ರದರ್ಶನಗೊಂಡವು. 
 
ಪ್ರಧಾನ ವೇದಿಕೆಯಲ್ಲಿ ನಡೆದ ಸಮ್ಮೇಳಾನಾಧ್ಯಕ್ಷರ ಜೊತೆ ಸಂವಾದ, ಕರ್ನಾಟಕ ಮೌಖಿಕ ಪರಂಪರೆ, ಮಂಡ್ಯ ನೆಲ ಮೂಲದ ಮೊದಲುಗಳು, ಕರ್ನಾಟಕ -೫೦: ಹಿನ್ನೋಟ – ಮುನ್ನೋಟ ಗಳ ಬಗ್ಗೆ ಇದ್ದ ಗೋಷ್ಠಿಗಳನ್ನು ಬಳಗದ ಸದಸ್ಯರು ಆಲಿಸಿದರು. ಈ ಸಂದರ್ಭದಲ್ಲಿ ಇತರೆ ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿ  ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಾಲಯಕ್ಕೆ ವಿವಿಧ ಸಾಹಿತಿಗಳ ನೂರಕ್ಕೂ ಹೆಚ್ಚು ಕನ್ನಡ ಪುಸ್ತಕಗಳನ್ನು ಖರೀದಿಸಲಾಯಿತು.
 
ಕನ್ನಡ ಬಳಗದ ಗೌರವಾಧ್ಯಕ್ಷರಾದ *ಡಾ. ಎಂ.ಜಿ. ಶಿವರಾಮು* ರವರ ಮಾರ್ಗದರ್ಶನದಲ್ಲಿ, ಡಾ. ವಿನಯ್.ಹೆಚ್. ಆರ್ ಮತ್ತು ಡಾ. ವಿಜಯ್ ಹೂಗಾರ್ ಭೇಟಿ ನೀಡಿದ ತಂಡದ ನೇತೃತ್ವ ವಹಿಸಿದ್ದರು. ಮುಖ್ಯ ಗ್ರಂಥಪಾಲಕ ಡಾ. ವಸಂತ್ ಕುಮಾರ್, ಗೃಹ ವೈದ್ಯರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಈ ತಂಡದಲ್ಲಿದ್ದರು.