೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ೨೦೨೪ ರ ಡಿಸೆಂಬರ್ ೨೦-೨೨ ರಂದು ಮಂಡ್ಯದಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸುವ ಸಲುವಾಗಿ ಮತ್ತು ಸಮ್ಮೇಳನದ ಅರಿವು ಮೂಡಿಸುವ ಸಲುವಾಗಿ ‘ *ಕನ್ನಡಕ್ಕಾಗಿ ಓಟ’* ಎಂಬ ಘೋಷವಾಕ್ಯದಡಿ *ಡಿಸೆಂಬರ್ ೧೭ ರಂದು ಬೆಳಿಗ್ಗೆ ೭ ಗಂಟೆಗೆ* ಪ್ರಚಾರ ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಕನ್ನಡ ಸಾಹಿತ್ಯ ಸಮ್ಮೇಳನ ಹಿಂದೆಂದಿಗಿಂತಲೂ ವಿಶಿಷ್ಟಮಯವಾಗಿ ಹಾಗೂ ವಿಶ್ವಮಟ್ಟದಲ್ಲಿ ಹೆಸರು ಮಾಡುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯಲ್ಲಿರುವ ಎಲ್ಲಾ ಸಾರ್ವಜನಿಕರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಎಲ್ಲಾ ಸಂಘ-ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಈ ಓಟದಲ್ಲಿ ಭಾಗವಹಿಸಿಲು ಕರೆ ಕೊಟ್ಟಿದ್ದರು.
ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಸಮ್ಮೇಳನ ನಡೆಯುವ ಸ್ಥಳ (ಸ್ಯಾಂಜೋ ಆಸ್ಪತ್ರೆ ಹಿಂಭಾಗ)ದವರೆಗೆ ಈ ಓಟ ಹಮ್ಮಿಕೊಳ್ಳಲಾಗಿತ್ತು. *ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ* ಯವರು ಇನ್ನಿತರೆ ರಾಜಕೀಯ ನಾಯಕರುಗಳು ಹಾಗು ಚಲನಚಿತ್ರ ನಟರ ಉಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಕನ್ನಡ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು.
ಕನ್ನಡ ಬಳಗದ ಗೌರವಾಧ್ಯಕ್ಷರಾದ *ಡಾ. ಎಂ.ಜಿ. ಶಿವರಾಮು* ರವರ ಮಾರ್ಗದರ್ಶನದಲ್ಲಿ, ಡಾ. ವಿನಯ್.ಹೆಚ್. ಆರ್ ಮತ್ತು ಡಾ. ವಿಜಯ್ ಹೂಗಾರ್ ರವರ ನೇತೃತ್ವದಲ್ಲಿ ನಡೆದ ಈ ಭಾಗವಹಿಸುವಿಕೆಯಲ್ಲಿ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ, ಕನ್ನಡ ಬಳಗದ ಇತರೆ ಸದಸ್ಯರು ಮತ್ತು ಸಂಸ್ಥೆಯ ವಿದ್ಯಾರ್ಥಿಗಳೂ ಸಕ್ರಿಯವಾಗಿ ಪಾಲ್ಗೊಂಡರು. ಅತಿ ಉತ್ಸಾಹದಿಂದ ಕನ್ನಡ ಪರ ಘೋಷಣೆ, ಸಾರ್ವಜನಿಕರಿಗೆ ಕನ್ನಡ ಬಳಸಿ ಉಳಿಸುವ ಸಂದೇಶಗಳೊಂದಿಗೆ ಓಟವನ್ನು ಸಂಪೂರ್ಣಗೊಳಿಸಿ ತಮ್ಮ ಭಾಷಾಭಿಮಾನ, ಕನ್ನಡ ಪ್ರೇಮವನ್ನು ಪ್ರದರ್ಶಿಸಿದರು.